ಯಡಿಯೂರಪ್ಪ ಬೇಕೋ? ಸರಕಾರ ಬೇಕೋ? ವರಿಷ್ಠ ಮಂಡಳಿಗೆ ರೆಡ್ಡಿಗಳ ಸವಾಲು
ಬೆಂಗಳೂರು ೨- ಯಡಿಯೂರಪ್ಪ ಬೇಕೋ? ಅಥವಾ ಸರಕಾರ ಬೇಕೋ? ಇದು ರೆಡ್ಡಿ ಸಹೋದರರು ಬಿಜೆಪಿ ಹೈಕಮಾಂಡ್ ಎದುರು ಇರಿಸಿರುವ ಹೊಸ ಸವಾಲು. ನಿನ್ನೆಯಷ್ಟೇ ದಿಲ್ಲಿಯಲ್ಲಿ ದಿನವಿಡೀ ಸಮಾಲೋಚನೆ, ಚರ್ಚೆ ಬಳಿಕ ಯಡಿಯೂರಪ್ಪ ನಾಯಕತ್ವವನ್ನು ಬದಲಿಸುವುದಿಲ್ಲ ಎಂದು ಪಕ್ಷದ ಹೈಕಮಾಂಡ್ ತೀರ್ಮಾನದ ಹಿನ್ನೆಲೆಯಲ್ಲಿ ಪಟ್ಟು ಬಿಡದ ರೆಡ್ಡಿ ಸಹೋದರರು ಇದೀಗ ಪಕ್ಷದ ಹೈಕಮಾಂಡ್‌ಗೆ ಸವಾಲು ಹಾಕಿದ್ದಾರೆ. ದಕ್ಷಿಣ ಭಾರತದಲ್ಲಿ ಕರ್ನಾಟಕದ ಮೂಲಕ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದವರು ನಾವು. ನಮಗೆ ಇದೀಗ ರಾಜ್ಯದ ನಾಯಕತ್ವದ ಮೇಲೆ ವಿಶ್ವಾಸ ಇಲ್ಲವೆಂದ ಮೇಲೆ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಕಟು ಸಂದೇಶವನ್ನು ರೆಡ್ಡಿ ಸಹೋದರರು ಪಕ್ಷದ ವರಿಷ್ಠರಿಗೆ ರವಾನಿಸಿದ್ದಾರೆ. ನಿನ್ನೆ ದಿಲ್ಲಿಯಲ್ಲಿ ಜಗದೀಶ ಶೆಟ್ಟರ್ ಅವರೊಂದಿಗೆ ನಿರಂತರವಾಗಿ ನಡೆಸಿದ ಚರ್ಚೆಯಲ್ಲಿ ಮನವೊಲಿಸಲು ತೀವ್ರ ಕಸರತ್ತು ನಡೆಸಿದ ಹೈಕಮಾಂಡ್‌ಗೆ ಶೆಟ್ಟರ್ ಜಗ್ಗದಿದ್ದರೂ ನಾಯಕತ್ವ ಬದಲಾವಣೆ ಇಲ್ಲ ಎಂಬ ತೀರ್ಮಾನ ಕೈಗೊಂಡಿತು. ರೆಡ್ಡಿ ಸಹೋದರರ ರಾಷ್ಟ್ರೀಯ ಹಿತೈಷಿ ಎಂದು ಬಿಂಬಿತವಾಗಿದ್ದ ಸುಷ್ಮಾ ಸ್ವರಾಜ್ ಕೂಡ ಇನ್ನಿತರ ರಾಷ್ಟ್ರೀಯ ನಾಯಕರ ಜೊತೆ ಸೇರಿಕೊಂಡು ಆಘಾತಕಾರಿ ನಿಲುವು ತಾಳುವ ಮೂಲಕ ಅಸಮಾಧಾನ ಮಾಡಿದ್ದಾರೆಂದು ಭಾವಿಸಿರುವ ರೆಡ್ಡಿಸಹೋದರರು ಇದೀಗ ಪಟ್ಟು ಬಿಡದೆ ಯಡಿಯೂರಪ್ಪ ಬೇಕೋ ಅಥವಾ ಸರಕಾರ ಬೇಕೋ ಎನ್ನುವ ಬಿಗಿ ಪಟ್ಟುವ ಹಿಡಿಯುವ ಮೂಲಕ ಹೊಸ ಸವಾಲನ್ನು ಸೃಷ್ಟಿಸಿದ್ದಾರೆ. ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಸುವುದಾದರೆ ನಮ್ಮೆಲ್ಲಾ ೬೦ ಮಂದಿ ಶಾಸಕರು ರಾಜೀನಾಮೆ ನೀಡುತ್ತೇವೆ ಎಂಬ ಬೆದರಿಕೆಯನ್ನೂ ರೆಡ್ಡಿ ಬ್ರದರ್ಸ್ ಹೈಕಮಾಂಡ್‌ಗೆ ಹಾಕಿದ್ದಾರೆಂದು ಮೂಲಗಳು ತಿಳಿಸಿವೆ. ಹೈಕಮಾಂಡ್‌ನ ನಿರ್ಧಾರ ಪ್ರಕಟವಾದ ಬಳಿಕ ಇದೇ ಮೊದಲ ಬಾರಿಗೆ ಜನಾರ್ದನ ರೆಡ್ಡಿ ಕರುಣಾಕರ ರೆಡ್ಡಿ ತಮ್ಮಕೆಲವು ಆಪ್ತರೊಂದಿಗೆ ದಿಲ್ಲಿಗೆ ಪ್ರಯಾಣ ಬೆಳೆಸುತ್ತಿದ್ದು, ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್, ಆದ್ವಾನಿ, ಅರುಣ್ ಜೈಟ್ಲಿ ಅವರು ಗಳು ಸುಷ್ಮಾ ಅವರನ್ನು ಭೆಟ್ಟಿಯಾಗಿ ಸ್ಪಷ್ಟ ನಿಲುವು ತಿಳಿಸಲಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. ನಿನ್ನೆ ದಿಲ್ಲಿಯಲ್ಲಿ ಯಡಿಯೂರಪ್ಪ ನಾಯಕತ್ವ ಬದಲಿಲ್ಲ ಎಂಬ ನಿಲುವು ಪ್ರಕಟವಾಗುತ್ತಿದ್ದಂತೆ ದಿಢೀರ್ ಹುಬ್ಬಳ್ಳಿಗೆ ತೆರಳಿ ಆರ್‌ಎಸ್‌ಎಸ್ ನಾಯಕ ಭಂಡೆ ಅವರನ್ನು ಭೆಟ್ಟಿಯಾಗಿ ಸುದೀಘರ ಸಮಾಲೋಚನೆ ನಡೆಸಿದರು. ಅಲ್ಲದೆ ತಮ್ಮ ಸ್ಪಷ್ಟ ನಿಲುವಿನ ಬಗ್ಗೆ ಹಾಗೂ ತಮ್ಮ ಬಳಿ ಇರುವ ಎಲ್ಲ ಶಾಸಕರಿಗೂ ಮಾಹಿತಿ ಹಂಚಿಕೆಯಾಗಿದ್ದು, ಯಾವುದೇ ಕಾರಣಕ್ಕು ತಮ್ಮ ಪಟ್ಟು ಸಡಿಲಿಸಬಾರದೆಂದು ದೃಢ ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದು ಬಂದಿದೆ. ಇನ್ನೂ ಮುಖ್ಯಮಂತ್ರಿ ಬೆಂಬಲಿಗರ ವಲಯದಲ್ಲಿ ಸಾಕಷ್ಟು ಬೆಲವಣಿಗೆಗಳು ನಡೆಯುತ್ತಿದ್ದು ನಿನ್ನೆ ರಾತ್ರಿ ಕೆಲವು ಆಪ್ತ ಶಾಸಕರು ಹಾಗೂ ಸಚಿವರು ಖಾಸಗಿ ಹೊಟೆಲ್‌ನಲ್ಲಿ ರಹಸ್ಯ ಸಭೆ ನಡೆಸಿದ್ದಾರೆ. ರೆಡ್ಡಿಸಹೋದರರು ಯಾವುದೇ ರೀತಿಯ ಆಮಿಷವೊಡ್ಡಿದರೂ ತಾವು ಯಾವುದಕ್ಕೂ ಮಣಿಯದೆ ಯಡಿಯೂರಪ್ಪ ಅವರ ನಾಯಕತ್ವವನ್ನು ಮುಂದುವರೆಸುವ ನಿರ್ಧಾರವನ್ನು ಕೇಂದ್ರ ವರಿಷ್ಠ ಮಮಡಳಿ ತೆಗೆದುಕೊಂಡಿರುವುದರಿಂದ ಸರಕಾರದ ಆಸ್ತಿತ್ವಕ್ಕೆ ಧಕ್ಕೆ ಬಾರದ ಹಿನ್ನೆಲೆಯಲ್ಲಿ ನಾವೆಲ್ಲ ಶಾಸಕರು ಒಗ್ಗಟ್ಟು ಪ್ರದರ್ಶಿಸಬೇಕೆಂದು ಸಿಎಂ ಬೆಂಬಲಿಗ ಶಾಸಕರು ತೀರ್ಮಾನಿಸಿದ್ದಾರೆ.